Home News ಬಾಲಕನ ಹತ್ಯೆಗೈದು ಕೆಸರಿನಲ್ಲಿ ಹೂತು ಹಾಕಿದ ವ್ಯಕ್ತಿ

ಬಾಲಕನ ಹತ್ಯೆಗೈದು ಕೆಸರಿನಲ್ಲಿ ಹೂತು ಹಾಕಿದ ವ್ಯಕ್ತಿ

by admin
0 comments

ಬೆಂಗಳೂರು: ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಮನೆಯ ಟೀವಿ ರಿಮೋಟ್ ಒಡೆದು ಹಾಕಿದ್ದಲ್ಲದೆ, ಮಗಳಿಗೆ ಹೊಡೆದಿದ್ದ ಅಪ್ರಾಪ್ತ ಬಾಲಕನನ್ನು ಹತ್ಯೆಗೈದು, ಕೆಸರಿನಲ್ಲಿ ಹೂತು ಹಾಕಿರುವ ಘಟನೆ ನಡೆದಿದೆ.

ಹತ್ಯೆಯಾದ ಬಾಲಕ ಬಿಹಾರ ಮೂಲದ ನಾತೂನ್ ಸಹಾನಿ ಅವರ ಪುತ್ರ ರಮಾನಂದ (8) ಎಂದು ತಿಳಿದು ಬಂದಿದೆ.

ಹತ್ಯೆಗೈದ ಆರೋಪಿ ಚಂದೇಶ್ವರ ಮಟ್ಟರು (36) ಎಂದು ತಿಳಿದು ಬಂದಿದೆ.

ಆರೋಪಿ ಮೇ 6ರಂದು ರಾತ್ರಿ ರಮಾನಂದನ ಹತ್ಯೆಗೈದು, ರಾಯಸಂದ್ರ ಸಮೀಪದ ಕೆರೆ ಪಕ್ಕದಲ್ಲಿ ಹೂತು ಹಾಕಿದ್ದ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

banner

ಬಿಹಾರ ಮೂಲದ ನಾತೂನ್ ಸಹಾನಿ ಮತ್ತು ಆರೋಪಿ ಚಂದೇಶ್ವರ ಕುಟುಂಬ ಸಮೇತ ಆರೇಳು ವರ್ಷಗಳ ಹಿಂದೆಯೇ ಬೆಂಗಳೂರಿಗೆ ಬಂದಿದ್ದು, ರಾಯಸಂದ್ರದಲ್ಲಿ ಅಕ್ಕ-ಪಕ್ಕದ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ಇಬ್ಬರು ಖಾಸಗಿ ಕಂಪನಿಗಳಲ್ಲಿ ಸೆಕ್ಯುರಿಟಿ ಗಾರ್ಡ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ನಾತೂನ್ ಸಹಾನಿ ಪತ್ನಿ ಅಪಾರ್ಟ್‌ಮೆಂಟ್‌ನಲ್ಲಿ ಅಡುಗೆ ಕೆಲಸ ಮಾಡುತ್ತಾರೆ. ಅವರ ಪುತ್ರ ರಮಾನಂದ್ ಖಾಸಗಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಚಂದೇಶ್ವರ ಪತ್ನಿ ಕೂಡ ಅಪಾರ್ಟ್‌ಮೆಂಟ್‌ನಲ್ಲಿ ಅಡುಗೆ ಕೆಲಸಕ್ಕೆ ಹೋಗುತ್ತಾರೆ. ಅವರ ಪುತ್ರಿ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ರಮಾನಂದ ಮತ್ತು ಆರೋಪಿಯ ಪುತ್ರಿ ಒಟ್ಟಿಗೆ ಆಟವಾಡುತ್ತಿದ್ದು, ಕೆಲವೊಮ್ಮೆ ಜಗಳ ಮಾಡಿಕೊಳ್ಳುತ್ತಿದ್ದರು. ಆಗ ರಮಾನಂದ್, ಆರೋಪಿಯ ಪುತ್ರಿಗೆ ಹೊಡೆಯುತ್ತಿದ್ದ. ಇದೇ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳ ನಡೆಯುತ್ತಿತ್ತು. ಅದು ವಿಕೋಪಕ್ಕೆ ಹೋದಾಗ ರಮಾನಂದ ತಾಯಿ ಅವಾಚ್ಯ ಶಬ್ಧಗಳಿಂದ ಆರೋಪಿಯನ್ನು ನಿಂದಿಸಿದ್ದರು ಎಂದು ತಿಳಿದು ಬಂದಿದೆ.

ಒಮ್ಮೆ ರಮಾನಂದ್‌, ಆರೋಪಿಯ ಮನೆಯ ಟಿವಿ ರಿಮೋಟ್ ಹೊಡೆದು ಹಾಕಿದ್ದ. ಆದ್ದರಿಂದ ಆರೋಪಿ ಕೋಪಗೊಂಡಿದ್ದ ಎಂದು ಪೊಲೀಸರು ಮಾಹಿತಿ‌ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಮೇ6ರಂದು ರಾತ್ರಿ ಆರೋಪಿ ಚಂದೇಶ್ವರ ರಮಾನಂದನನ್ನು ರಾಯಸಂದ್ರ ಕೆರೆ ಬಳಿ ಕರೆದೊಯ್ದು ಮೊದಲಿಗೆ ಕತ್ತು ಹಿಸುಕಿ ಹತ್ಯೆಗೈದು, ಬಳಿಕ ಕೆರೆಯ ಕೆಸರಿನಲ್ಲಿ ತಲೆಯನ್ನು ಮಾತ್ರ ಹೂತು ಹಾಕಿ, ಮನೆಗೆ ವಾಪಸ್ ಹೋಗಿದ್ದಾನೆ. ಈ ಜಾಗದಲ್ಲಿ ದೊಡ್ಡದಾಗಿ ಹುಲ್ಲು ಬೆಳೆದಿದ್ದರಿಂದ ಯಾರಿಗೂ ಗೊತ್ತಾಗಿಲ್ಲ.

ಮಗ ಕಾಣಿಸುತ್ತಿಲ್ಲ ಎಂದು ನಾತೂನ್ ಸಹಾನಿ ದಂಪತಿ ಎಲ್ಲೆಡೆ ಹುಡುಕಾಟ ನಡೆಸಿದ್ದಾರೆ. ಆರೋಪಿ ಬಳಿಯೂ ಪುತ್ರನ ಬಗ್ಗೆ ವಿಚಾರಿಸಿದ್ದಾರೆ. ಆದರೆ, ಆರೋಪಿ ಗೊತ್ತಿಲ್ಲ ಎಂದು ಹೇಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಪುತ್ರ ನಾಪತ್ತೆಯಾದ ಕುರಿತು ಪೊಲೀಸ್‌ ಠಾಣೆಗೆ ದೂರು ನೀಡಿದ ನಾತೂನ್ ಸಹಾನಿ ದಂಪತಿ, ಚಂದೇಶ್ವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಆದ್ದರಿಂದ ಆರೋಪಿಯನ್ನು ಠಾಣೆಗೆ ಕರೆಸಿಕೊಂಡು ತೀವ್ರ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾನೆ.

ಕೂಡಲೇ ಘಟನಾ ಸ್ಥಳಕ್ಕೆ ಹೋಗಿ ಕೆಸರಲ್ಲಿ ಹೂತಿದ್ದ ಬಾಲಕನ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.

ಈ ಕುರಿತು ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like

Leave a Comment

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.

Latest Articles

ಇದು ತಾಜಾ ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳನ್ನು ಸಮಯೋಚಿತವಾಗಿ ನೇರವಾಗಿ ನಿಮಗೆ ತಲುಪಿಸುತ್ತದೆ.