ಬೆಳ್ತಂಗಡಿ: ಮೇಲಂತಬೆಟ್ಟು ಗ್ರಾಮದ ಮೀಸಲು ಅರಣ್ಯ ಪ್ರದೇಶದೊಳಗೆ ಅಕ್ರಮವಾಗಿ ಪ್ರವೇಶ ಮಾಡಿ ಹಿಟಾಚಿ ಬಳಸಿ ಬೆಳೆಬಾಳುವ ಮರಗಳನ್ನು ಕಡಿದ ಕಳ್ಳರನ್ನು ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಸೊತ್ತು ಸಹಿತ ವಶಪಡಿಸಿಕೊಂಡಿದ್ದಾರೆ.
ಬೆಳ್ತಂಗಡಿ ಅರಣ್ಯ ಇಲಾಖೆಯ ಆರ್‌ಎಫ್‌ಒ ತ್ಯಾಗರಾಜ್.ಟಿ.ಎಂ. ನೇತೃತ್ವದ ತಂಡವು ಎ.16 ರ ಸಂಜೆ ದಾಳಿ ನಡೆಸಿ ಅಕ್ರಮವಾಗಿ ಕಡಿದ ಮರಗಳು ಮತ್ತು ಉಪಕರಣಗಳನ್ನು ವಶಪಡಿಸಿಕೊಂಡಿದೆ.
ಬೆಳ್ತಂಗಡಿ ನ್ಯಾಯಾಲಯದಿಂದ ಅನುಮತಿ ಪಡೆದ ನಂತರ, ಎ.19 ರಂದು ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ದಾಳಿಯ ಸಂದರ್ಭ ಅಧಿಕಾರಿಗಳು ಸುಮಾರು 3 ಲಕ್ಷ ರೂ. ಮೌಲ್ಯದ ವಿವಿಧ ಜಾತಿಯ 14.500 ಮೀಟರ್ ಮರಗಳು, 30 ಲಕ್ಷ ರೂ. ಮೌಲ್ಯದ ಒಂದು ಹಿಟಾಚಿ ಯಂತ್ರ, 60 ಸಾವಿರ ಮೌಲ್ಯದ ಒಂದು ಮರ ಕಟ್ಟಿಂಗ್ ಮಾಡುವ ಯಂತ್ರ, 15 ಸಾವಿರ ಮೌಲ್ಯದ ಒಂದು ಕಬ್ಬಿಣದ ಸಂಕೋಲೆಗಳನ್ನು ಜಪ್ತಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಪ್ರಮುಖ ಆರೋಪಿಗಳಾದ ನಾರಾವಿ ಗ್ರಾಮದ ಡೊಂಕಬೆಟ್ಟು ನಿವಾಸಿ ಪ್ರಕಾಶ್ ಪೂಜಾರಿ ಮತ್ತು ಕಾರ್ಕಳ ತಾಲೂಕಿನ ನೂರಲೆಟ್ಟು ಗ್ರಾಮದ ಹಿಟಾಚಿ ಯಂತ್ರದ ಮಾಲೀಕ ಮತ್ತು ನಿರ್ವಾಹಕ ಕರುಣಾಕರ ಭಂಡಾರಿ ಅವರ ವಿರುದ್ಧ ಬೆಳ್ತಂಗಡಿ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಆರೋಪಿಗಳಿಗೆ ವಿಚಾರಣೆಗೆ ಹಾಜರಾಗುವಂತೆ ಅರಣ್ಯ ಇಲಾಖೆಯು ನೋಟಿಸ್ ಜಾರಿ ಮಾಡಿದೆ ಎಂದು ತಿಳಿದು ಬಂದಿದೆ.