ಬೆಂಗಳೂರು: ಉದ್ಯಮಿಯೊಬ್ಬರು ಪಡೆದಿದ್ದ 13 ಲಕ್ಷ ರೂ. ಸಾಲಕ್ಕೆ ಬಡ್ಡಿ ರೂಪದಲ್ಲಿ 63 ಲಕ್ಷ ರೂ. ಪಡೆದಿದಲ್ಲದೆ, ರೌಡಿಶೀಟರ್‌ಗಳ ಹೆಸರು ಹೇಳಿಕೊಂಡು ಮತ್ತಷ್ಟು ಹಣಕ್ಕೆ ಬೇಡಿಕೆಯಿಟ್ಟು ಜೀವ ಬೆದರಿಕೆ ಹಾಕಿದ ಆರೋಪದಡಿ ಮೂವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಬನಶಂಕರಿ ನಿವಾಸಿಗಳಾದ ದೀಪಕ್, ಜಯಕುಮಾರ್ ಹಾಗೂ ಬಾಬು ಎಂದು ತಿಳಿದು ಬಂದಿದೆ.
ಲಕ್ಕಸಂದ್ರ ನಿವಾಸಿ ಉದ್ಯಮಿ ಎಂ. ರವಿ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ದೂರುದಾರ ಉದ್ಯಮಿ ಎಂ.ರವಿ ಕಳೆದ 15 ವರ್ಷಗಳಿಂದ ಆರೋಪಿ ದೀಪಕ್ ಪರಿಚಯವಿದೆ.ಈತನ ಮೂಲಕ ಮತ್ತೊಬ್ಬ ಆರೋಪಿ ಜಯಕುಮಾರ್ ಪರಿಚಯವಾಗಿದೆ.
2020ನೇ ಸಾಲಿನಲ್ಲಿ ರವಿ ವ್ಯವಹಾರ ಸಂಬಂಧ ದೀಪಕ್‌ನಿಂದ 13 ಲಕ್ಷ ರೂ. ಸಾಲ ಪಡೆದಿದ್ದಾರೆ. ಒಂದು ತಿಂಗಳ ಅವಧಿಗೆ 13 ಲಕ್ಷಕ್ಕೆ 13 ಲಕ್ಷ ರೂ. ಸೇರಿ ಒಟ್ಟು 26 ಲಕ್ಷ ರೂ. ಕೊಡುವಂತೆ ಮಾತುಕತೆ ನಡೆಸಿ ಒಪ್ಪಂದ ಪತ್ರಕ್ಕೆ ಸಹಿ ಮಾಡಿದ್ದಾರೆ. ಈ ನಡುವೆ ರವಿ ಅವರ ಕಂಪನಿ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ಸಕಾಲಕ್ಕೆ ಹಣ ಹಿಂದಿರುಗಿಸಲು ಸಾಧ್ಯವಾಗಿಲ್ಲ.
ಈ ಸಂದರ್ಭ ದೀಪಕ್ 26 ಲಕ್ಷ ರೂ.ಗೆ 10 ಲಕ್ಷ ರೂ. ಸೇರಿಸಿ ಒಟ್ಟು 36 ಲಕ್ಷ ರೂ ಕೊಡುವಂತೆ ಬೆದರಿಕೆ ಹಾಕಿದ್ದಾನೆ. ಅದರಂತೆ ರವಿ ಪ್ರತಿ ತಿಂಗಳು 3.60 ಲಕ್ಷ ರೂ. ಬಡ್ಡಿಯಂತೆ ಒಂದು ವರ್ಷಗಳ ಕಾಲ ದೀಪಕ್‌ಗೆ ಹಣ ಹಾಕಿದ್ದಾರೆ. ಬಡ್ಡಿ ಕಟ್ಟಲಾಗದೆ ರವಿ ಕುರುಬರಹಳ್ಳಿಯ ಮನೆಯನ್ನು 53 ಲಕ್ಷ ರೂ.ಗೆ ಮಾರಾಟ ಮಾಡಿದ್ದು, ಆ ಹಣದಲ್ಲಿ ದೀಪಕ್ 10 ಲಕ್ಷ ರೂ. ಪಡೆದುಕೊಂಡಿದ್ದಾನೆ. ಬಳಿಕ ರವಿ ಅವರ ಖಾತೆಯಿಂದ ಬಲವಂತವಾಗಿ 8.50 ಲಕ್ಷ ರೂ. ವರ್ಗಾಯಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಯಕುಮಾರ್ ಬಳಿ ಕರೆದೊಯ್ದು ರವಿ ಅವರ ಕಾರಿನ ದಾಖಲೆಗಳನ್ನು ಜಯಕುಮಾರ್‌ಗೆ ಕೊಡಿಸಿ 8 ಲಕ್ಷ ರೂ. ಪಡೆದುಕೊಂಡಿದ್ದಾನೆ. ಈ 8 ಲಕ್ಷಕ್ಕೆ ಮಾಸಿಕ 80 ಸಾವಿರ ರೂ. ಬಡ್ಡಿ ಕಟ್ಟುವಂತೆ ಹೇಳಿದ್ದಾನೆ. ಬಡ್ಡಿ ಹಣ ಕೊಡುವುದು ವಿಳಂಬವಾಗಿದ್ದಕ್ಕೆ ಆರೋಪಿಗಳು ಹಾಗೂ ಅವರ ಸಹಚರರು ಉದ್ಯಮಿ ರವಿ ಅವರನ್ನು ಎಳೆದೊಯ್ದು ಕೊಲೆ ಬೆದರಿಕೆ ಹಾಕಿದ್ದಾರೆ. 4 ಕೋಟಿ ರೂ. ಕೊಡಬೇಕು ಎಂದು ನಕಲಿ ದಾಖಲೆ ಸೃಷ್ಟಿಸಿ ಸಹಿ ಪಡೆದುಕೊಂಡಿದ್ದಾರೆ.
ಬಳಿಕ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದಲ್ಲದೆ, ಹತ್ಯೆ ಮಾಡುವುದಾಗಿ ಪ್ರಾಣ ಬೆದರಿಕೆ ಹಾಕಿದ್ದರು ಎಂದು ರವಿ ಅವರು ದೂರಿನಲ್ಲಿವಉಲ್ಲೇಖೀಸಿದ್ದಾರೆ ಎಂದು ತಿಳಿದು ಬಂದಿದೆ.
ಹೆಚ್ಚುವರಿ ಹಣ ವಸೂಲಿಗೆ ಆರೋಪಿಗಳು, ರೌಡಿಶೀಟರ್ ಸೈಲೆಂಟ್ ಸುನೀಲ್ ನಮಗೆ ಪರಿಚಯವಿದ್ದು, ನಿನ್ನನ್ನು ಕೊಲೆ ಮಾಡಿಸುತ್ತೇವೆ ಎಂದು, ಸೈಲೆಂಟ್ ಸುನೀಲ್ ಜೊತೆಗೆ ತೆಗೆಸಿರುವ ಫೋಟೋಗಳನ್ನು ರವಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದಾರೆ. ಹಾಗೆಯೇ ರೌಡಿಗಳಾದ ಪ್ರಕಾಶನಗರದ ವಿಜಿ, ಪರುಷೋತ್ತಮ್ ಜೊತೆಗಿರುವ ಫೋಟೋಗಳನ್ನು ಕಳುಹಿಸಿದ್ದರು ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದೀಗ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನೂ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಶೋಧ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.