ಕನಕಪುರ: ತಾಲೂಕಿನ ಶಿವನಹಳ್ಳಿಯಲ್ಲಿ ಅಪಘಾತದಲ್ಲಿ ಅಳಿಯ ಸಾವಿಗೀಡಾದ ಸುದ್ದಿ ತಿಳಿದು ಸೋದರತ್ತೆ ಸಹ ಹೃದಯಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ಶಿವನಹಳ್ಳಿ ಗ್ರಾಪಂ ಬಿಲ್ ಕಲೆಕ್ಟರ್ ನಾಗೇಶ್(42) ಅಪಘಾತದಲ್ಲಿ ಮೃತಪಟ್ಟಿದ್ದು, ಅವರ ಸೋದರತ್ತೆ ಶಿವರುದ್ರಮ್ಮ(63) ಸುದ್ದಿ ತಿಳಿಯುತ್ತಿದ್ದಂತೆ ಆಘಾತಗೊಂಡು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಶಿವನಹಳ್ಳಿ ಗ್ರಾಪಂ ಬಿಲ್ ಕಲೆಕ್ಟರ್ ನಾಗೇಶ್ ತಮ್ಮ ಪತ್ನಿ ಹಾಗೂ ಮಗಳೊಂದಿಗೆ ಭಾನುವಾರ ಮೇಲುಕೋಟೆಯಲ್ಲಿ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳಲು ಕಾರಿನಲ್ಲಿ ಮೇಲು ಕೋಟೆಗೆ ಹೋಗಿದ್ದರು. ಮದುವೆ ಮುಗಿಸಿ ಹಿಂದಿರುಗುತ್ತಿರುವಾಗ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.
ನಾಗೇಶ್ ಸ್ಥಳದಲ್ಲೇ ಮೃತಪಟ್ಟಿದ್ದು, ಇವರ ಪತ್ನಿ ನೀಲಮ್ಮ ಪ್ರಜ್ಞೆ ಕಳೆದುಕೊಂಡಿದ್ದು, ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ನಾಗೇಶ್ ಅಪಘಾತದಲ್ಲಿ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಶಿವನಹಳ್ಳಿ ಗ್ರಾಮದಲ್ಲಿ ಇವರ ಸೋದರತ್ತೆಶಿವರುದ್ರಮ್ಮ ತೀವ್ರ ಆಘಾತಗೊಂಡಿದ್ದಾರೆ.
ಸೋದರಳಿಯನ ಸಾವಿನಿಂದ ಕಂಗಾಲಾದ ಮಹಿಳೆ ಅಸ್ವಸ್ಥಗೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಹಾರೋಹಳ್ಳಿ ಸಮೀಪದ ದಯಾನಂದಸಾಗರ್ ಆಸ್ಪತ್ರೆಗೆ ಕರೆತಂದು ತಪಾಸಣೆಗೆ ಒಳಪಡಿಸಿದರೂ ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.